ಮೋಟರ್ ಸ್ಪರ್ಧೆ  -
ಎರಡು ಚಕ್ರದ ಅಥವಾ ನಾಲ್ಕು ಚಕ್ರದ ಮೋಟರು ವಾಹನಗಳ ಸ್ಪರ್ಧೆ. ಇದನ್ನು ಮೋಟರು ಸೈಕಲ್ ಮತ್ತು ಮೋಟರು ಕಾರು ಸ್ಪರ್ಧೆ ಎಂದು ಎರಡು ವಿಧದಲ್ಲಿ ವಿಂಗಡಿಸಲಾಗಿದೆ. 1876ರಲ್ಲಿ ಮೋಟರು ಕಾರುಗಳು ತಯಾರಾದಾಗ ಯಾರು ಹೆಚ್ಚು ವೇಗವಾಗಿ ಕಾರು ಓಡಿಸುತ್ತಾರೆಂಬ ಪಂಥ ಏರ್ಪಟ್ಟು ಈ ಸ್ಪರ್ಧೆ ಆರಂಭವಾಯಿತು. ಪ್ರಪಂಚದ ಮೊತ್ತಮೊದಲು ಮೋಟರು ಕಾರು ಪಂದ್ಯ 1887 ಏಪ್ರಿಲ್ 20ರಂದು ಪ್ಯಾರಿಸ್ಸಿನ ನ್ಯೂಯಿಲಿ ಮತ್ತು ವರ್ಸೇಲ್ಸ್ ನಡುವೆ ಇರುವ 32 ಕಿ.ಮೀ. ಉದ್ದದ ರಸ್ತೆಯ ಮೇಲೆ ನಡೆಯಿತು. ಜಾರ್ಜ್‍ಬೌಟನ್ 74 ಮಿನಿಟುಗಳಲ್ಲಿ ಈ ದೂರವನ್ನು ಕ್ರಮಿಸಿದ. ಮೋಟರು ಕಾರಿನಲ್ಲಿ ಬಹಳ ದೂರವನ್ನು ಕ್ರಮಿಸುವ, ವೇಗದ ಪಂದ್ಯವೇ ರ್ಯಾಲಿ. 1907ರಲ್ಲಿ ಬೀಜಿಂಗ್‍ನಿಂದ (ಹಿಂದಿನ ಪೀಕಿಂಗ್) ಪ್ಯಾರಿಸ್‍ವರೆಗೆ ಪ್ರಪ್ರಥಮರ್ಯಾಲಿ ನಡೆಯಿತು. 1894ರಲ್ಲಿ ಪ್ಯಾರಿಸ್ ಮತ್ತು ರೋಮ್‍ಗಳ ನಡುವೆ ನಡೆದ 128 ಕಿಮೀ ದೂರದ ಪ್ರಥಮ ನಿಯಮಬದ್ಧ ಸ್ಪರ್ಧೆಯಲ್ಲಿ ಜರ್ಮನಿಯ ಗಾಟ್‍ಲೀಬ್ ಡೈಮ್ಲರ್ ಜಯಶಾಲಿಯಾದ. ಇದಾದ ಒಂದು ವರ್ಷದ ಬಳಿಕ ಅಮೆರಿಕದಲ್ಲಿ ಡೇಟೋನಾ ಬೀಚ್ ಎಂಬಲ್ಲಿ ಮೋಟರು ಸ್ಪರ್ಧೆ ನಡೆಯಿತು. ಹೀಗಾಗಿ ಈ ಸ್ಥಳ ಮೋಟರು ಸ್ಪರ್ಧೆಯ ಕೇಂದ್ರವಾಯಿತು. ಇಲ್ಲಿ 1964ರಲ್ಲಿ ನಡೆದ ಅಂತರಾಷ್ಟ್ರೀಯ ಮೋಟರು ಸ್ಪರ್ಧೆಯಲ್ಲಿ ಉತ್ತರ ಕೆರೊಲೀನ ಪ್ರಾಂತ್ಯದ ರಿಚರ್ಡ್ ಪೆಟ್ಟಿ ಎಂಬಾತ ಗಂಟೆಗೆ 275.07 ಕಿ.ಮೀ. ವೇಗದಲ್ಲಿ ವಾಹನ ನಡೆಸಿದ.

	ಇಂದು ಗ್ರ್ಯಾನ್ ಪ್ರೀ, ಹಾಟ್‍ರಾಡ್ ಸ್ಪರ್ಧೆ ಟ್ರ್ಯಾಕ್‍ರೇಸಿಂಗ್, ರೋಡ್‍ರೇಸಿಂಗ್, ರ್ಯಾಲಿ, ಟ್ರಯಲ್ಸ್, ಕ್ಲಬ್ ರೇಸಿಂಗ್, ಡ್ರ್ಯಾಗ್ ರೇಸಿಂಗ್, ಮೊದಲಾದ ಸ್ಪರ್ಧೆಗಳು ಪ್ರಪಂಚಾದ್ಯಂತ ನಡೆಯುತ್ತವೆ.

	ಗ್ರ್ಯಾನ್ ಪ್ರೀ ಉತ್ತಮ ಸ್ಪರ್ಧಾ ವಾಹನಗಳಿಗಾಗಿ ನಡೆಯುವ ಸ್ಪರ್ಧೆ. ಹಾಟ್‍ರಾಡ್ ಸ್ಪರ್ಧೆ ಖಾಸಗಿಯಾಗಿ ರೂಪಿಸಿದ ಮೋಟರುಗಳಿಗಾಗಿ ನಡೆಯುವ ವೇಗದ ಸ್ಪರ್ಧೆ, ಡ್ರ್ಯಾಗ್ ಸ್ಪರ್ಧೆ 0.4 ಕಿ.ಮೀ. ಉದ್ದ ಮಾರ್ಗದಲ್ಲಿ ನಡೆಯುವ ವೇಗದ ಸ್ಪರ್ಧೆ, ಇಂಡಿಯಾನಾ ಪೋಲಿಸ್ ಸ್ಪೀಡ್‍ವೇರೇಸ್ 800 ಕಿ.ಮೀ. ದೂರದ ಸ್ಪರ್ಧೆಯಿದು. ಭಾರತದಲ್ಲಿ ಕೂಡ ಹಿಮಾಲಯನ್ ಕಾರ್ ರ್ಯಾಲಿಯನ್ನು ರಾಷ್ಟ್ರಮಟ್ಟದಲ್ಲಿ ನಡೆಸಲಾಗುತ್ತದೆ.

	ಮೋಟರು ಸೈಕಲ್ ಸ್ಪರ್ಧೆ: ಇದರಲ್ಲಿ ಎರಡು ವಿಧ: 1. ರೇಸಿಂಗ್ 2. ರ್ಯಾಲಿ. ರೇಸಿಂಗ್‍ನಲ್ಲಿ ಉದ್ದನೆಯ ಅಥವಾ ವೃತ್ತಾಕಾರದ ಟ್ರ್ಯಾಕ್ ಇದ್ದು ಅದಕ್ಕೆಂದೇ ಮೀಸಲಾದ ಮಾರ್ಗದ ಮೇಲೆ ಗಾಡಿ ಓಡಿಸಬೇಕು. ಇಲ್ಲಿ ಚಾಲಕನ ಕೈಚಳಕದ ಜೊತೆಗೆ ವಾಹನ ನಡೆಸುವ ವೇಗವೂ ಅಷ್ಟೇ ಮುಖ್ಯ. ರ್ಯಾಲಿಯಲ್ಲಿ ಒಂದು ಬಿಂದುವಿನಿಂದ ಇನ್ನೊಂದು ಬಿಂದುವಿಗೆ ಹೋಗಿ ಅಂತಿಮ ಗುರಿ ತಲುಪಬೇಕು. ಇದರಲ್ಲಿಯ ಹಾದಿ ಅಂಕುಡೊಂಕಾಗಿರಬಹುದು. ಇಲ್ಲಿ ಚಾಲಕನ ಕುಶಲತೆ, ವಾಹನದ ವೇಗಗಳ ಜೊತೆಗೆ ಆತ ತನ್ನ ವಾಹನದ ಮೇಲೆ ಇಟ್ಟುಕೊಂಡಿರುವ ಹತೋಟಿಯೂ ಬಹಳ ಮುಖ್ಯ. 

	ಮೋಟರುಸೈಕಲ್ ಸ್ಪರ್ಧೆಯ ಹೆಚ್ಚಿನ ಚಟುವಟಿಕೆಗಳನ್ನು ಅಮೆರಿಕನ್ ಮೋಟರುಸೈಕಲ್ ಅಸೋಸಿಯೇಷನ್ (ಎಎಮ್‍ಎ) ನೋಡಿಕೊಳ್ಳುತ್ತದೆ. ಇದು ವಾರ್ಷಿಕಸ್ಪರ್ಧೆಗಳನ್ನೂ ಇನ್ನಿತರ ಅನೇಕ ಸ್ಪರ್ಧೆಗಳನ್ನೂ ಏರ್ಪಡಿಸುತ್ತದೆ. ಹೆಚ್ಚಿನ ಅಂಕ (ಪಾಯಿಂಟ್ಸ್) ಗಳಿಸಿದವರು ರಾಷ್ಟ್ರೀಯ ಚಾಂಪಿಯನ್. 1970ರಲ್ಲಿ ಕಾಲ್ವಿನ್ ರೇಬರ್ನ್ ಎಂಬಾತ ಗಂಟೆಗೆ 427.26 ಕಿ.ಮೀ. ಕ್ರಮಿಸಿ ವಿಶ್ವದಾಖಲೆ ಸ್ಥಾಪಿಸಿದ. ಅಂತರಾಷ್ಟ್ರೀಯ ಮೋಟರುಸೈಕಲ್ ಸ್ಪರ್ಧೆಯನ್ನು ಇಂಟರ್‍ನ್ಯಾಷನಲ್ ಮೋಟರುಸೈಕ್ಲಿಂಗ್ ಫೆಡರೇಷನ್ ವ್ಯವಸ್ಥೆಗೊಳಿಸುತ್ತದೆ.

	ಮೋಟರ್‍ಸೈಕಲ್ ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಶೇಷವಾದ ಪರವಾನಗಿ ಪಡೆದಿರಬೇಕು. ವೈದ್ಯಕೀಯ ತಪಾಸಣೆ ನಡೆಸಿ ರಾಷ್ಟ್ರೀಯ ಅಂತರಾಷ್ಟ್ರೀಯ ರೇಸಿಂಗ್ ಲೈಸೆನ್ಸ್ ನೀಡಲಾಗುವುದು. ಅಂತರಾಷ್ಟ್ರೀಯ ಟ್ರೋಫಿ ಸ್ಪರ್ಧೆ ಪ್ರಪ್ರಥಮವಾಗಿ 1913ರಲ್ಲಿ ಬ್ರಿಟನ್ನಿನಲ್ಲಿ ನಡೆಯಿತು. ಸ್ಪರ್ಧೆ ನಡೆಯುವ ಹಿಂದಿನ ವರ್ಷ ನಡೆಸಿದ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ನಡೆಯುವುದು.

	ಗುಡ್ಡ ಏರುವ ಸ್ಪರ್ಧೆ 1904ರಲ್ಲಿ ಪ್ರಾರಂಭವಾಯಿತು. ಕಡಿದಾದ 500 ಅಡಿ (152 ಮೀ.) ಎತ್ತರದ ಬೆಟ್ಟವನ್ನು ಎರಡೇ ಯತ್ನದಲ್ಲಿ ಮೇಲೇರುವುದು ಮಣ್ಣುರಸ್ತೆಯ ಕಂಬಳ ಸ್ಪರ್ಧೆ ಪದೇ ಪದೇ ಎಡಕ್ಕೆ ತಿರುಗುತ್ತ ಆಳೆತ್ತರಕ್ಕೆ ಧೂಳು, ಕೆಸರು ಚಿಮ್ಮಿಸುತ್ತ ವಾಹನಚಾಲನೆ ಮಾಡುವುದು ಮುಂತಾದವು ನಡೆಯುತ್ತವೆ. ಇಂಥ ದ್ವಿಚಕ್ರವಾಹನ ಚಾಲಕರು ಎಡಗಾಲಿಗೆ ಉಕ್ಕುನಿಂದ ತಯಾರಾದ ವಿಶೇಷ ಬೂಟುಗಳನ್ನು ಹಾಕಿಕೊಂಡು, ಆಗಾಗ ನೆಲಕ್ಕೆ ಕಾಲು ಸವರುತ್ತ ಸಮತೋಲನ ಕಾಯ್ದುಕೊಳ್ಳುವುದುಂಟು.

	ಮರಳಿನ ಅಥವಾ ಹುಲ್ಲಿನ ನೆಲದಲ್ಲಿ ನಡೆಯುವ ಸ್ಪರ್ಧೆಗಳೂ ಇವೆ. ಮಣ್ಣಿನ ದಿಣ್ಣೆ, ನೀರಿನಹೊಂಡ ಅಥವಾ ಕೆಸರಿನ ಮೂಲಕ ಹಾದುಹೋಗಬೇಕಾದಂಥ ಹಳ್ಳಿಗಾಡು ಸ್ಪರ್ಧೆಗಳೂ ಉಂಟು. ಇಲ್ಲಿ ನೆಲದ ಮೇಲೆ ಸಮತೋಲನ ತಪ್ಪದೆ, ಕಾಲನ್ನು ನೆಲಕ್ಕೆ ತಾಗಿಸದೆ ಪೂರ್ಣ ದೂರವನ್ನು ಕ್ರಮಿಸಬೇಕು.

	ರಸ್ತೆ ಓಟ (ರೋಡ್ ರೇಸಿಂಗ್) ಕೂಡ ರೋಮಾಂಚಕಾರಿಯಾಗಿರುವಂಥದೇ. ಇದರಲ್ಲಿ ಗ್ರ್ಯಾನ್ ಪ್ರೀ ವಿಧಾನದ ರೇಸಿಂಗ್ ನಡೆಯುತ್ತದೆ. ಇದಕ್ಕೆಂದೇ ನಿರ್ಮಿಸಲಾದ ಉದ್ದ ಹಾದಿಯಲ್ಲಿ ಮೋಟರುಸೈಕಲ್‍ಗಳು ಓಡುತ್ತವೆ. ಈ ಮೋಟರುಸೈಕಲುಗಳ ವಿನ್ಯಾಸ ವಿಶಿಷ್ಟವಾಗಿರುತ್ತದೆ. ದೋಣಿಯಂತೆ ಇಕ್ಕಟ್ಟಾದ ಅವಕಾಶದಲ್ಲಿ ಚಾಲಕ ಹುದುಗಿ ಕುಳಿತಿರುತ್ತಾನೆ.

	ಈ ಸ್ಪರ್ಧೆಯಲ್ಲಿ ವಾಹನಗಳ ಅಶ್ವ ಸಾಮಥ್ರ್ಯ ಹಾಗೂ ಅವುಗಳ ಬಾಳಿಕೆಯ ಬಗೆಗೆ ಸಂಪೂರ್ಣ ಪರೀಕ್ಷೆ ನಡೆಸಲಾಗುತ್ತದೆ. ಇವನ್ನು ತಯಾರಿಸುವ ಕಾರ್ಖಾನೆಯವರಿಗೆ ತಮ್ಮ ವಾಹನದಲ್ಲಿಯ ದೋಷಗಳನ್ನು ತಿಳಿದು ಸರಿಪಡಿಸುವ ಅವಕಾಶ ದೊರೆಯುತ್ತದೆ. ಹಲವು ವೇಳೆ ಸಂಸ್ಥೆಯವರೇ ನುರಿತ ಸವಾರರನ್ನು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಮಾಡುವುದೂ ಉಂಟು. ವಿವಿಧ ನಮೂನೆಯ ವಿವಿಧ ಅಶ್ವಸಾಮಥ್ರ್ಯಗಳ ದ್ವಿಚಕ್ರ ಮೋಟರು ವಾಹನಗಳು ತಯಾರಾಗುತ್ತಲಿವೆಯಾಗಿ ಆಯಾ ವರ್ಗದ ದ್ವಿಚಕ್ರ ಮೋಟರು ವಾಹನಗಳ ರ್ಯಾಲಿಯನ್ನು ಖಾಸಗೀ ಸಂಘ-ಸಂಸ್ಥೆಗಳು ಪ್ರಾಯೋಜಿಸಿ ಏರ್ಪಡಿಸುವುದು ಉಂಟು. ಪ್ರಪಂಚದ ಪ್ರಸಿದ್ಧ ಮೋಟರುಸೈಕಲ್ ಸ್ಪರ್ಧೆಗಳೆಂದರೆ ಜರ್ಮನ್ ಗ್ರ್ಯಾನ್ ಪ್ರೀ (ಸಾಮಾನ್ಯವಾಗಿ ಇದು ಜರುಗುವುದು ಮೇ ತಿಂಗಳಲ್ಲಿ), ದಿ ಬೆಲ್ಜಿಯಮ್ ಗ್ರ್ಯಾನ್ ಪ್ರೀ (ಜುಲೈ), ಫ್ರೆಂಚ್ ಗ್ರ್ಯಾಂಡ್ ಪ್ರೀ (ಜುಲೈ), ದಿ ಇಟಾಲಿಯನ್ ಗ್ರ್ಯಾನ್ ಪ್ರೀ (ಸೆಪ್ಟೆಂಬರ್) ಇತ್ಯಾದಿ.
  (ಬಿ.ಎಸ್.ಬಿ.; ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ